ವಿರಳಾನಿಲಗಳು
 	ಆವರ್ತಕೋಷ್ಟಕದ ಸೊನ್ನೆ ಗುಂಪಿನ 6 ಸದಸ್ಯ ಅನಿಲಧಾತುಗಳು (ರೇರ್ ಗ್ಯಾಸಸ್). ಹೀಲಿಯಮ್ (ಊe), ನಿಯಾನ್ (ಓe), ಆರ್ಗಾನ್ (ಂಡಿ), ಕ್ರಿಪ್ಟಾನ್ (ಏಡಿ), ಕ್ಸೆನಾನ್ (ಘಿe) ಮತ್ತು ರೇಡಾನ್ (ಖಟಿ) ಇವು ವಾಯುವಿನಲ್ಲಿ ಅಲ್ಪಪ್ರಮಾಣದಲ್ಲಿರುವುದರಿಂದ ವಿರಳಾನಿಲಗಳೆಂಬ ಹೆಸರು. ಇತರ ಧಾತುಗಳೊಡನೆ ರಾಸಾಯನಿಕವಾಗಿ ಸಂಯೋಗವಾಗದೆ ಪ್ರತ್ಯೇಕವಾಗಿ ಉಳಿಯುವ ಸ್ವಭಾವವುಳ್ಳವಾದ್ದರಿಂದ ಉತ್ತಮಾನಿಲಗಳು (ನೋಬಲ್ ಗ್ಯಾಸಸ್), ಜಡಾನಿಲಗಳು (ಇನರ್ಟ್ ಗ್ಯಾಸಸ್) ಎಂಬ ಹೆಸರುಗಳೂ ಇವೆ. ರೇಡಾನ್ ಒಂದನ್ನು ಬಿಟ್ಟರೆ ಅನಿಲಧಾತುಗಳ ಹೆಸರುಗಳೆಲ್ಲವೂ ಗ್ರೀಕ್ ಮೂಲದವೇ. ರೇಡಿಯಮ್ ಧಾತುವಿನ ವಿಕಿರಣಪಟು ಕ್ಷಯದಿಂದ ಉತ್ಪನ್ನವಾಗುವುದರಿಂದ ರೇಡಾನ್ ಎಂಬ ಹೆಸರು ಬಂದಿದೆ. 

	ಇಂಗ್ಲಿಷ್ ಭೌತವಿಜ್ಞಾನಿ ಲಾರ್ಡ್ ರ್ಯಾಲೇ (1842-1919) ಎಂಬವ ವಾಯುವಿನಲ್ಲಿಯ ಸಾರಜನಕದ ಸಾಂದ್ರತೆ ರಾಸಾಯನಿಕ ವಿಧಾನದಿಂದ ತಯಾರಿಸಿದ ನೈಟ್ರೊಜನ್ನಿನ ಸಾಂದ್ರತೆಗಿಂತಲೂ ಸುಮಾರು 0.5%ರಷ್ಟು ಹೆಚ್ಚಾಗಿದೆ ಎಂಬ ಅಂಶವನ್ನು ಗಮನಿಸಿದ (1892). ಈ ವ್ಯತ್ಯಾಸ ಪ್ರಯೋಗಾಂತರ್ಗತ ದೋಷದಿಂದ (ಎಕ್ಸ್‍ಪೆರಿಮೆಂಟಲ್ ಎರರ್) ಉಂಟಾದುದು ಎಂದು ಹೇಳುವಂತಿರಲಿಲ್ಲ. ವಾಯುವಿನಿಂದ ತಯಾರಿಸಿದ ನೈಟ್ರೊಜನ್ನಿನಲ್ಲಿ ಹೆಚ್ಚು ಸಾಂದ್ರವಾದ ಬೇರೊಂದು ಅನಿಲ ಇರಬಹುದೆಂಬ ಸೂಚನೆ ಗಮನಿಸಿ ಈ ಅನಿಲವನ್ನು ಬೇರ್ಪಡಿಸುವ ಯತ್ನ ನಡೆಯಿತು. 50 ಲೀಟರ್ ಗಾತ್ರವುಳ್ಳ ದೊಡ್ಡ ಗೋಳದಲ್ಲಿ 9 ಭಾಗದಷ್ಟು ವಾಯು ಮತ್ತು 11 ಭಾಗದಷ್ಟು ಆಕ್ಸಿಜನ್ ತೆಗೆದುಕೊಂಡು, ಈ ಮಿಶ್ರಣದ ಮೂಲಕ ಪ್ಲಾಟಿನಮ್ ಧ್ರುವಗಳ ಸಹಾಯದಿಂದ ವಿದ್ಯುತ್ ಕಿಡಿಗಳನ್ನು ಹಾಯಿಸಲಾಯಿತು. ನೈಟ್ರೊಜನ್-ಆಕ್ಸಿಜನ್ ಸಂಯೋಗಗೊಂಡು ನೈಟ್ರಿಕ್ ಆಕ್ಸೈಡ್ ಉತ್ಪತ್ತಿಯಾಯಿತು. ಇದು ಆಕ್ಸಿಜನ್ನಿನೊಡನೆ ಮತ್ತೆ ಸಂಯೋಗ ಗೊಂಡು ನೈಟ್ರೊಜನ್ ಡೈಆಕ್ಸೈಡ್ ಆಯಿತು. ಈ ಉಪಕರಣದ ಮೂಲಕ ಕಾಸ್ಟಿಕ್ ಸೋಡ ದ್ರಾವಣವನ್ನು ಹಾಯಿಸಿ ನೈಟ್ರೊಜನ್ ಡೈಆಕ್ಸೈಡನ್ನು ಪಡೆಯಲಾಯಿತು. ಉಳಿದ ಅನಿಲದಲ್ಲಿ ಆರ್ಗಾನ್ ಮತ್ತು ಇತರ ವಿರಳಾನಿಲಗಳು ಇದ್ದುವು. 

	ಸ್ಕಾಟ್ಲೆಂಡಿನ ರಸಾಯನವಿಜ್ಞಾನಿ ವಿಲಿಯಮ್ ರ್ಯಾಮ್ಸೇ (1852-1916) ಎಂಬವ ವಾಯುವಿನಿಂದ ಮೊದಲು ಕಾರ್ಬನ್ ಡೈಆಕ್ಸೈಡನ್ನೂ ನೀರಾವಿಯನ್ನೂ ಬೇರ್ಪಡಿಸಿ ಅನಂತರ ವಾಯುವನ್ನು ಕಾದ ತಾಮ್ರದ ಮೇಲೂ ಆ ಬಳಿಕ ಕಾದ ಮೆಗ್ನೀಸಿಯಮ್ಮಿನ ಮೇಲೂ ಹಾಯಿಸಿ ಆರ್ಗಾನ್ ಅನಿಲವನ್ನು ಬೇರ್ಪಡಿಸಿದ(1894).

	ಈ ಆವಿಷ್ಕಾರಗಳಿಂದ ಉತ್ತೇಜನ ಪಡೆದ ರ್ಯಾಮ್ಸೆ ಮತ್ತು ರ್ಯಾಂಲೆ ತಮ್ಮ ಪ್ರಯೋಗಗಳನ್ನು ಮುಂದುವರಿಸಲಾಗಿ ವಿರಳಾನಿಲಗಳ ಒಂದು ಗುಂಪೇ ಪತ್ತೆಯಾಯಿತು. ಧಾತುಗಳ ಆವರ್ತಕೋಷ್ಠಕದಲ್ಲಿ ಕ್ಷಾರಲೋಹಗಳ ಮತ್ತು ಹ್ಯಾಲೋಜನ್‍ಗಳ ನಡುವೆ ಇವನ್ನು ಸೇರಿಸಲಾಯಿತು. ರೇಡಾನ್ ಅನಿಲ ರುದರ್‍ಫರ್ಡ್ (1871-1937) ಮತ್ತು ಸಾಡಿ (1877-1965) ಎಂಬವರಿಂದ ಪತ್ತೆಯಾಯಿತು. 

	ತಯಾರಿಕೆ : ಹೀಲಿಯಮ್ ಮತ್ತು ರೇಡಾನ್‍ಗಳನ್ನು ಬಿಟ್ಟರೆ ಇತರ ವಿರಳಾನಿಲಗಳ ತಯಾರಿಕೆಗೆ ವಾಯುವೇ ಮೂಲ ಆಕರ. ಇಲ್ಲಿ ಎರಡು ಮುಖ್ಯ ವಿಧಾನಗಳಿವೆ : 

	1. ವಾಯುವಿನಲ್ಲಿರುವ ಇತರ ಅನಿಲಗಳನ್ನು ರಾಸಾಯನಿಕ ಕ್ರಮ ದಿಂದ ಬೇರ್ಪಡಿಸುವುದು. ರ್ಯಾಲೇ ಮತ್ತು ರ್ಯಾಮ್ಸೇಯರ ವಿಧಾನಗಳು ಈ ಬಗೆಗೆ ಸೇರಿದವು. 

	2. ದ್ರವಿತ ವಾಯುವನ್ನು ಆಂಶಿಕ ಆಸವನಕ್ಕೆ ಈಡುಮಾಡುವುದು. ಈ ವಿಧಾನವನ್ನು ಕೈಗಾರಿಕೆಯಲ್ಲೂ ಬಳಸುವುದಿದೆ. 

	ವಾಯುವಿನಲ್ಲಿರುವ ಅನಿಲಗಳ ಕುದಿಬಿಂದುಗಳು (ಸೆಲ್ಸಿಯಸುಗಳಲ್ಲಿ) 760 ಮಿಮೀ ಒತ್ತಡದಲ್ಲಿ ಈ ಮುಂದಿನಂತೆ ಇವೆ : ಹೀಲಿಯಮ್ 268.9ಲಿ, ನಿಯಾನ್ 246.1ಲಿ, ನೈಟ್ರೊಜನ್ 195.8ಲಿ, ಆರ್ಗಾನ್ 185.9ಲಿ,  ಆಕ್ಸಿಜನ್ 184ಲಿ, ಕ್ರಿಪ್ಟಾನ್ 153.2ಲಿ, ಕ್ಸೆನಾನ್ 108.1ಲಿ.

	ಅನಿಲಗಳ ಕುದಿಬಿಂದುಗಳು ಬೇರೆ ಬೇರೆಯಾಗಿರುವ ಕಾರಣ ದ್ರವ ವಾಯುವನ್ನು ಆಂಶಿಕ ಆಸವನಕ್ಕೆ ಈಡುಮಾಡುವುದರಿಂದ ಅನಿಲಗಳನ್ನು ಬೇರ್ಪಡಿಸಬಹುದು. 

	ಈ ಅನಿಲಗಳನ್ನು ಬೇರ್ಪಡಿಸುವ ಇನ್ನೊಂದು ವಿಧಾನ ಇದೆ. ತೆಂಗಿನ ಚಿಪ್ಪಿನಿಂದ ಆದ ಇದ್ದಲಿಗೆ ಬೇರೆ ಬೇರೆ ಉಷ್ಣತೆಗಳಲ್ಲಿ ಬೇರೆ ಬೇರೆ ವಿರಳಾನಿಲಗಳನ್ನು ಹೀರಿಕೊಳ್ಳುವ ಸಾಮಥ್ರ್ಯವಿದೆ. 100ಲಿಸೇ ನಲ್ಲಿ ಆರ್ಗಾನ್-ಕ್ರಿಪ್ಟಾನ್ ಮತ್ತು ಕ್ಸೆನಾನ್‍ಗಳೂ-180ಲಿಸೇ ನಲ್ಲಿ ನಿಯಾನ್ ಅನಿಲವೂ ಪೂರ್ಣವಾಗಿ ಹೀರಲ್ಪಡುತ್ತವೆ. ಆರ್ಗಾನ್, ಕ್ರಿಪ್ಟಾನ್ ಮತ್ತು ಕ್ಸೆನಾನ್‍ಗಳನ್ನು ಹೀರಿಕೊಂಡಿರುವ ಇದ್ದಲನ್ನು, ದ್ರವವಾಯುವಿನ ಉಷ್ಣತೆಯಲ್ಲಿ, ಮತ್ತೊಂದು ಇದ್ದಲಿನ ಚೂರಿನ ಸಂಪರ್ಕದಲ್ಲಿ ಇರಿಸಿದರೆ, ಎರಡನೆಯ ಚೂರಿಗೆ ಆರ್ಗಾನ್ ಅನಿಲ ಹರಿಯುತ್ತದೆ. ಎರಡನೆಯ ಚೂರನ್ನು ಕಾಸಿದರೆ ಆರ್ಗಾನ್ ಬಿಡುಗಡೆಯಾಗುವುದು. ಮೊದಲನೆಯ ಇದ್ದಲಿನ ಚೂರನ್ನು-90ಲಿಸೇ ಉಷ್ಣತೆಗೆ ಕಾಸಿದರೆ, ಕ್ರಿಪ್ಟಾನ್ ಬಿಡುಗಡೆಯಾಗಿ ಕ್ಸೆನಾನ್ ಮಾತ್ರ ಉಳಿಯುತ್ತದೆ. 

	ಗುಣಗಳು : ಈ ಅನಿಲಗಳಿಗೆ ಬಣ್ಣ, ವಾಸನೆ ಮತ್ತು ರುಚಿಯಿಲ್ಲ. ಸಾಮಾನ್ಯವಾಗಿ ಇತರ ಮೂಲ ವಸ್ತುಗಳೊಡನೆ ಸಂಯೋಗವಾಗುವುದಿಲ್ಲ. 1962ರಿಂದ ಈಚೆಗೆ ಕ್ರಿಪ್ಟಾನ್, ಕ್ಸೆನಾನ್ ಮತ್ತು ರೇಡಾನ್‍ಗಳ ಕೆಲವು ಸಂಯುಕ್ತ ವಸ್ತುಗಳನ್ನು ತಯಾರಿಸಿರುತ್ತಾರೆ (ವಿರಳಾನಿಲಗಳ ವಿವರಗಳಿಗೆ ಆಯಾ ಶೀರ್ಷಿಕೆಗಳನ್ನು ನೋಡಿ).	
		
(ಎನ್.ಎಸ್.ಕೆ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ